ಕಾರವಾರ ತಾಲೂಕಿನ ಮಾಜಾಳಿ ಕಡಲತೀರದಲ್ಲಿ ಸರ್ಕಾರ ನಿರ್ಮಾಣ ಮಾಡಲು ಮುಂದಾಗಿರುವ ಮೀನುಗಾರಿಕಾ ಬಂದರಿಗೆ ಇದೀಗ ಮೀನುಗಾರರಿಂದಲೇ ವಿರೋಧ ವ್ಯಕ್ತವಾಗಿದೆ. ಸುಮಾರು 250 ಕೋಟಿ ರೂಪಾಯಿ ವೆಚ್ಚದಲ್ಲಿ ಬಂದರು ನಿರ್ಮಾಣ ಮಾಡಿ ಮೀನುಗಾರಿಕೆಗೆ ಮತ್ತಷ್ಟು ಬಲ ನೀಡುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಲು ಸರ್ಕಾರ ಈ ಯೋಜನೆ ಕೈಗೊಂಡಿದೆ. ಈ ಬಂದರು ನಿರ್ಮಾಣದ ಬಳಿಕ 80 ಮೀನುಗಾರಿಕಾ ಬೋಟುಗಳನ್ನ ನಿಲ್ಲಿಸಲು ಅವಕಾಶವಾಗಲಿದ್ದು ಸುಮಾರು 4 ಸಾವಿರಕ್ಕೂ ಅಧಿಕ ಮೀನುಗಾರರಿಗೆ ಇದರಿಂದ ಅನುಕೂಲವಾಗಲಿದೆ. ಆದರೆ ಈ ಬಂದರು ನಿರ್ಮಾಣಕ್ಕೆ ಮೀನುಗಾರರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮಾಜಾಳಿ ಕಡಲತೀರದಲ್ಲಿ ಬಂದರು ನಿರ್ಮಾಣವಾದಲ್ಲಿ ಸಾಂಪ್ರದಾಯಿಕ ಮೀನುಗಾರರಿಗಿಂತ ಮೀನುಗಾರಿಕೆ ಉದ್ಯಮ ನಡೆಸುವ ಬಂಡವಾಳ ಶಾಹಿಗಳು ಯಾಂತ್ರಿಕ ಮೀನುಗಾರಿಕೆಯನ್ನ ಕೈಗೊಳ್ಳುತ್ತಾರೆ. ಇದರಿಂದ ಅನಾದಿ ಕಾಲದಿಂದ ಮೀನುಗಾರಿಕೆ ನಂಬಿಕೊಂಡು ಜೀವನ ನಡೆಸುತ್ತಿರುವ ಮೀನುಗಾರರು ಬೀದಿಗೆ ಬೀಳುವಂತಾಗಲಿದೆ ಅನ್ನೋದು ಇಲ್ಲಿನವರ ಆರೋಪ.
#publictv #karwar